Skip to content

ಸಭಾ ಪರ್ವ — ಸಂಧಿ ೩ · ಸಭಾ ಪರ್ವ — ಸಂಧಿ ೩

Sabha Parva · Sandhi 3

sabhā parva — saṃdhi 3

The complete sabha parva · sandhi 3 in Kannada.

67 passagesKannada with transliteration

An original emblem for Sabha Parva.

Invocation

2.3.opening

ಭೂಪತಿಯ ನೇಮದಲಿ ಜಂಬೂ ದ್ವೀಪ ನವ ಖಂಡದಲಿ ಸಕಳಮ ಹೀಪತಿಗಳನು ಗೆಲಿದು ಕಪ್ಪವ ತಂದನಾ ಪಾರ್ಥ

bhūpatiya nēmadali jaṃbū dvīpa nava khaṃḍadali sakaḷama hīpatigaḷanu gelidu kappava taṃdanā pārtha

ಕೇಳು ಜನಮೇಜಯ ಧರಿತ್ರೀ ಪಾಲ ಪಾಂಡವಪುರಿಗೆ ಲಕ್ಷ್ಮೀ ಲೋಲ ಬಿಜಯಂಗೈದು ಭೀಮಾರ್ಜುನರ ಗಡಣದಲಿ ಬಾಲೆಯರ ಕಡೆಗಣ್ಣ ಮಿಂಚಿನ ಮಾಲೆಗಳ ಲಾಜಾಭಿವರುಷದ ಲಾಲನೆಯ ರಚನೆಯಲಿ ಹೊಕ್ಕನು ರಾಜಮಂದಿರವ

kēḷu janamējaya dharitrī pāla pāṃḍavapurige lakṣmī lōla bijayaṃgaidu bhīmārjunara gaḍaṇadali bāleyara kaḍegaṇṇa miṃcina mālegaḷa lājābhivaruṣada lālaneya racaneyali hokkanu rājamaṃdirava

Report an error

ಕಂಡು ಕೃಷ್ಣನನಿವರ ಕಾಣಿಸಿ ಕೊಂಡನರಸು ಕ್ಷೇಮ ಕುಶಲವ ಕಂಡು ಬೆಸಗೊಳಲೇಕೆ ಬಹು ಮಾತಿನಲಿ ಫಲವೇನು ಕಂಡೆವೈ ನಿನ್ನಮಳ ಕರುಣಾ ಖಂಡ ಜಲಧಿಯ ಭಕ್ತ ಜನಕಾ ಖಂಡಲದ್ರುಮವೆಂದು ತಕ್ಕೈಸಿದನು ಹರಿಪದವ

kaṃḍu kr̥ṣṇananivara kāṇisi koṃḍanarasu kṣēma kuśalava kaṃḍu besagoḷalēke bahu mātinali phalavēnu kaṃḍevai ninnamaḷa karuṇā khaṃḍa jaladhiya bhakta janakā khaṃḍaladrumaveṃdu takkaisidanu haripadava

Report an error

ನಡೆದ ಪರಿಯನು ರಿಪು ಪುರವನವ ಗಡಿಸಿ ಹೊಕ್ಕಂದವನು ಮಗಧನ ತೊಡಕಿ ತೋಟಿಯ ಮಾಡಿ ಭೀಮನ ಕಾದಿಸಿದ ಪರಿಯ ಬಿಡದೆ ಹಗಲಿರುಳೊದಗಿ ವೈರಿಯ ಕಡೆಯ ಕಾಣಿಸಿ ನೃಪರ ಸೆರೆಗಳ ಬಿಡಿಸಿ ಬಂದಂದವನು ವಿಸ್ತರಿಸಿದನು ಮುರವೈರಿ

naḍeda pariyanu ripu puravanava gaḍisi hokkaṃdavanu magadhana toḍaki tōṭiya māḍi bhīmana kādisida pariya biḍade hagaliruḷodagi vairiya kaḍeya kāṇisi nr̥para seregaḷa biḍisi baṃdaṃdavanu vistarisidanu muravairi

Report an error

ಎಲೆ ಮಹೀಪತಿ ನಿನ್ನ ಯಜ್ಜ ಸ್ಥಲಕೆ ಬಾಧಕರಿಲ್ಲ ವನದಲಿ ಪುಲಿಯಿರಲು ಗೋಧನ ಕುಲಕೆ ಯವಸಾಂಬು ಗೋಚರವೆ ನೆಲನ ಗರುವರ ಗೊಂದಣವನಂ ಡಲೆವನಖಿಳ ದ್ವೀಪಪತಿಗಳ ನೆಳಲ ಸೈರಿಸನಳಿದನವನಿನ್ನೇನು ನಿನಗೆಂದ

ele mahīpati ninna yajja sthalake bādhakarilla vanadali puliyiralu gōdhana kulake yavasāṃbu gōcarave nelana garuvara goṃdaṇavanaṃ ḍalevanakhiḷa dvīpapatigaḷa neḷala sairisanaḷidanavaninnēnu ninageṃda

Report an error

ರಚಿಸು ಯಜ್ಜಾರಂಭವನು ನೃಪ ನಿಚಯವನು ದಾಯಾದ್ಯರನು ಬರಿ ಸುಚಿತ ವಚನದಲೆಮ್ಮ ಕರೆಸಿದರಾ ಕ್ಷಣಕೆ ಬಹೆವು ಸಚಿವರಾವೆಡೆ ಕಳುಹು ಬದರಿಯ ರುಚಿರ ಋಷಿಗಳ ಕರೆಸು ನಿನ್ನಭಿ ರುಚಿಗೆ ನಿಷ್ಪ್ರತ್ಯೂಹವೆಂದನು ದಾನವಧ್ವಂಸಿ

racisu yajjāraṃbhavanu nr̥pa nicayavanu dāyādyaranu bari sucita vacanadalemma karesidarā kṣaṇake bahevu sacivarāveḍe kaḷuhu badariya rucira r̥ṣigaḷa karesu ninnabhi rucige niṣpratyūhaveṃdanu dānavadhvaṃsi

Report an error

ಎಂದು ಕಳುಹಿಸಿಕೊಂಡು ದೋರಕಿ ಗಿಂದಿರಾಪತಿ ಮಾಗಧನ ರಥ ದಿಂದ ಬಿಜಯಂಗೈದನಿನಿಬರು ಕಳುಹಿ ಮರಳಿದರು ಬಂದ ವೇದವ್ಯಾಸ ಧೌಮ್ಯರ ನಂದು ಕರೆಸಿ ಯುಧಿಷ್ಠಿರನು ನಿಜ ಮಂದಿರದೊಳೊಪ್ಪಿದನು ಪರಿಮಿತ ಜನ ಸಮೂಹದಲಿ

eṃdu kaḷuhisikoṃḍu dōraki giṃdirāpati māgadhana ratha diṃda bijayaṃgaidaninibaru kaḷuhi maraḷidaru baṃda vēdavyāsa dhaumyara naṃdu karesi yudhiṣṭhiranu nija maṃdiradoḷoppidanu parimita jana samūhadali

Report an error

ಅಕಟ ನಾರದನೇಕೆ ಯಜ್ಜ ಪ್ರಕಟವನು ಮಾಡಿದನು ನಮಗೀ ಸಕಲ ಧರಣೀಕ್ಷತ್ರ ವರ್ಗದ ವಿಜಯ ಕಿರುಕುಳವೆ ವಿಕಟ ಜಂಬೂದ್ವೀಪ ಪರಿಪಾ ಲಕರು ನಮ್ಮಿನಿಬರಿಗೆ ಸದರವೆ ಸುಕರವೇ ವರ ರಾಜಸೂಯವೆನುತ್ತ ಚಿಂತಿಸಿದ

akaṭa nāradanēke yajja prakaṭavanu māḍidanu namagī sakala dharaṇīkṣatra vargada vijaya kirukuḷave vikaṭa jaṃbūdvīpa paripā lakaru namminibarige sadarave sukaravē vara rājasūyavenutta ciṃtisida

Report an error

ಮಣಿವರಲ್ಲರಸುಗಳು ಮಾಡದೆ ಮಣಿದೆವಾದರೆ ಕೀರ್ತಿಕಾಮಿನಿ ಕುಣಿವಳೈ ತ್ರೈಜಗದ ಜಿಹ್ವಾರಂಗ ಮಧ್ಯದಲಿ ಬಣಗುಗಳು ನಾವೆಂದು ನಾಕದ ಗಣಿಕೆಯರು ನಗುವರು ಸುಯೋಧನ ನಣಕವಾಡುವಡಾಯ್ತು ತೆರನೆಂದರಸ ಬಿಸುಸುಯ್ದ

maṇivarallarasugaḷu māḍade maṇidevādare kīrtikāmini kuṇivaḷai traijagada jihvāraṃga madhyadali baṇagugaḷu nāveṃdu nākada gaṇikeyaru naguvaru suyōdhana naṇakavāḍuvaḍāytu teraneṃdarasa bisusuyda

Report an error

ಎನಲು ಧಿಮ್ಮನೆ ನಿಂದು ಭುಗಿಲೆಂ ದನು ಕಿರೀಟಿ ವೃಥಾಭಿಯೋಗದ ಮನಕತಕೆ ಮಾರಾಂಕವಾಯ್ತೇ ಹರ ಮಹಾದೇವ ನಿನಗಕೀರ್ತಿ ವಧೂಟಿ ಕುಣಿವಳೆ ಜನದ ಜಿಹ್ವಾ ರಂಗದಲಿ ಹಾ ಯೆನುತ ತಲೆದೂಗಿದನು ಘನಶೌರ್ಯಾನುಭಾವದಲಿ

enalu dhimmane niṃdu bhugileṃ danu kirīṭi vr̥thābhiyōgada manakatake mārāṃkavāytē hara mahādēva ninagakīrti vadhūṭi kuṇivaḷe janada jihvā raṃgadali hā yenuta taledūgidanu ghanaśauryānubhāvadali

Report an error

ಮಣಿಯರೇ ಮನ್ನೆಯರು ನಾಕದ ಗಣಿಕೆಯರು ನಗುವರೆ ಸುಯೋಧನ ನಣಕವಾಡುವನೇ ಶಿವಾ ತಪ್ಪೇನು ತಪ್ಪೇನು ಕಣಿಗಳಿವು ನಾಳಿನಲಿ ಕಬ್ಬಿನ ಕಣಿಗಳೋ ಗಾಂಢೀವವಿದು ನಿ ರ್ಗುಣವೊ ತಾನರ್ಜುನ ಮಹೀರುಹವೆಂದನಾ ಪಾರ್ಥ

maṇiyarē manneyaru nākada gaṇikeyaru naguvare suyōdhana naṇakavāḍuvanē śivā tappēnu tappēnu kaṇigaḷivu nāḷinali kabbina kaṇigaḷō gāṃḍhīvavidu ni rguṇavo tānarjuna mahīruhaveṃdanā pārtha

Report an error

ಸಕಲ ಜಂಬೂದ್ವೀಪ ಪರಿಪಾ ಲಕರ ಭಂಡಾರಾರ್ಥಕಿದೆ ಸು ಪ್ರಕಟವೆಂದುಂಗುರವನಿತ್ತನು ನೃಪನ ಹಸ್ತದಲಿ ಸುಕರ ದುಷ್ಕರವೆಂಬ ಚಿಂತಾ ವಿಕಳತೆಗೆ ನೀ ಪಾತ್ರನೇ ಸಾ ಧಕರನೇ ಸಂಹರಿಪೆ ತಾ ವೀಳೆಯವನೆನಗೆಂದ

sakala jaṃbūdvīpa paripā lakara bhaṃḍārārthakide su prakaṭaveṃduṃguravanittanu nr̥pana hastadali sukara duṣkaraveṃba ciṃtā vikaḷatege nī pātranē sā dhakaranē saṃharipe tā vīḷeyavanenageṃda

Report an error

ಪೂತು ಫಲುಗುಣ ನಿನ್ನ ಕುಲಕಭಿ ಜಾತ ಶೌರ್ಯಕೆ ಗರುವಿಕೆಗೆ ಸರಿ ಮಾತನಾಡಿದೆ ಸಲುವುದೈ ನಿನಗೆನುತ ಕೊಂಡಾಡಿ ಈತನುತ್ತರದೆಸೆಗೆ ಭೀಮನು ಶಾತಮನ್ಯುವದೆಸೆಗೆ ಯಮಳರ ಭೀತರಿದ್ದೆಸೆಗೆಂದು ವೇದವ್ಯಾಸ ನೇಮಿಸಿದ

pūtu phaluguṇa ninna kulakabhi jāta śauryake garuvikege sari mātanāḍide saluvudai ninagenuta koṃḍāḍi ītanuttaradesege bhīmanu śātamanyuvadesege yamaḷara bhītariddesegeṃdu vēdavyāsa nēmisida

Report an error

ನೆರಹಿ ಬಲವನು ನಾಲ್ಕು ದಿಕ್ಕಿಗೆ ಪರುಠವಿಸಿದರು ಫಲುಗುಣನನು ತ್ತರಕೆ ಮೂಡಲು ಪವನಸುತ ದಕ್ಷಿಣಕೆ ಸಹದೇವ ವರುಣ ದಿಕ್ಕಿಗೆ ನಕುಲನೀನಾ ಲ್ವರಿಗೆ ಕೊಟ್ಟನು ವೀಳೆಯವ ಹಿರಿ ಯರಸಿ ತಂದಳು ತಳಿಗೆ ತಂಬುಲ ಮಂಗಳಾರತಿಯ

nerahi balavanu nālku dikkige paruṭhavisidaru phaluguṇananu ttarake mūḍalu pavanasuta dakṣiṇake sahadēva varuṇa dikkige nakulanīnā lvarige koṭṭanu vīḷeyava hiri yarasi taṃdaḷu taḷige taṃbula maṃgaḷāratiya

Report an error

ಪರಮ ಲಗ್ನದೊಳಿಂದು ಕೇಂದ್ರದೊ ಳಿರಲು ಗುರು ಭಾರ್ಗವರು ಲಗ್ನದೊ ಳಿರೆ ಶುಭಗ್ರಹದೃಷ್ಟಿ ಸಕಳೇಕಾದಶಸ್ಥಿತಿಯ ಕರಣ ತಿಥಿ ನಕ್ಷತ್ರವಾರೋ ತ್ಕರದಲಭಿಮತ ಸಿದ್ಧಿ ಯೋಗದೊ ಳರಸನನುಜರು ದಿಗ್ವಿಜಯಕನುವಾದರೊಗ್ಗಿನಲಿ

parama lagnadoḷiṃdu kēṃdrado ḷiralu guru bhārgavaru lagnado ḷire śubhagrahadr̥ṣṭi sakaḷēkādaśasthitiya karaṇa tithi nakṣatravārō tkaradalabhimata siddhi yōgado ḷarasananujaru digvijayakanuvādarogginali

Report an error

ಅರಸ ವೇದವ್ಯಾಸ ಧೌಮ್ಯಾ ದ್ಯರಿಗೆ ಬಲವಂದೆರಗಿ ಕುಂತಿಯ ಚರಣ ಧೂಳಿಯ ಕೊಂಡು ವಿಪ್ರವ್ರಜಕೆ ಕೈಮುಗಿದು ಅರಸಿಯರು ದೂರ‍್ವಾಕ್ಷತೆಯ ದಧಿ ವಿರಚಿತದ ಮಾಂಗಲ್ಯವನು ವಿ ಸ್ತರಿಸೆ ಬಹುವಿಧ ವಾದ್ಯದಲಿ ಹೊರವಂಟರರಮನೆಯ

arasa vēdavyāsa dhaumyā dyarige balavaṃderagi kuṃtiya caraṇa dhūḷiya koṃḍu vipravrajake kaimugidu arasiyaru dūrvākṣateya dadhi viracitada māṃgalyavanu vi starise bahuvidha vādyadali horavaṃṭararamaneya

Report an error

ಅರಸ ಕೇಳೈ ಮೊದಲಲರ್ಜುನ ಚರಿತವನು ವಿಸ್ತರದಲರುಪುವೆ ನುರುಪರಾಕ್ರಮಿ ನಡೆದು ಬಿಟ್ಟನು ಸಾಲ್ವ ದೇಶದಲಿ ಪುರಕೆ ದೂತರ ಕಳುಹಲವನಿವ ರುರವಣಿಗೆ ಮನವಳುಕಿ ಕೊಟ್ಟನು ತುರಗಗಜ ರಥಧನ ವಿಲಾಸಿನಿ ಜನವನುಚಿತದಲಿ

arasa kēḷai modalalarjuna caritavanu vistaradalarupuve nuruparākrami naḍedu biṭṭanu sālva dēśadali purake dūtara kaḷuhalavaniva ruravaṇige manavaḷuki koṭṭanu turagagaja rathadhana vilāsini janavanucitadali

Report an error

ಅವನ ಕಾಣಿಸಿಕೊಂಡು ರಾಜ್ಯದೊ ಳವನ ನಿಲಿಸಿ ತದೀಯ ಸೇನಾ ನಿವಹ ಸಹಿತಲ್ಲಿಂದ ನಡೆದನು ಮುಂದೆ ವಹಿಲದಲಿ ಅವನಿಪತಿ ಕಟದೇವನೆಂಬವ ನವಗಡಿಸಿ ಸರ್ವಸ್ವವನು ಕೊಂ ಡವನ ಬಲಸಹಿತಾ ದ್ಯುಮತ್ಸೇನಕನ ಝೋಂಪಿಸಿದ

avana kāṇisikoṃḍu rājyado ḷavana nilisi tadīya sēnā nivaha sahitalliṃda naḍedanu muṃde vahiladali avanipati kaṭadēvaneṃbava navagaḍisi sarvasvavanu koṃ ḍavana balasahitā dyumatsēnakana jhōṃpisida

Report an error

ಆತನನು ಗೆಲಿದನು ಸುನಾಭನ ನೀತಿಗೆಡಿಸಿ ತದೀಯ ಸೇನಾ ವ್ರಾತ ಸಹಿತಲ್ಲಿಂದ ಪ್ರತಿವಿಂಧ್ಯಕನನಪ್ಪಳಿಸಿ ಆತನರ್ಥವಕೊಂಡು ತತ್ಪ್ರಾ ಗ್ಜ್ಯೋತಿಷಕೆ ಧಾಳಿಟ್ಟನಲ್ಲಿ ಮ ಹಾತಿಬಲನವನೊಡನೆ ಬಲುಹಾಯ್ತರ್ಜುನನ ಸಮರ

ātananu gelidanu sunābhana nītigeḍisi tadīya sēnā vrāta sahitalliṃda prativiṃdhyakananappaḷisi ātanarthavakoṃḍu tatprā gjyōtiṣake dhāḷiṭṭanalli ma hātibalanavanoḍane baluhāytarjunana samara

Report an error

ಜೀನಕರ ಬೋಟಕ ಕಿರಾತರ ನೂನಬಲ ಸಹಿತೀ ಮಹೀಪತಿ ಸೂನು ಕಾದಿದನೀತನಲಿ ಭಗದತ್ತನೆಂಬವನು ಈ ನರನ ಶರಜಾಲವದು ಕ ಲ್ಪಾನಲನ ಕಾಲಾಟವಿದರೊಡ ನಾನಲಿಂದ್ರಾದ್ಯರಿಗೆ ಸದರವೆ ರಾಯ ಕೇಳೆಂದ

jīnakara bōṭaka kirātara nūnabala sahitī mahīpati sūnu kādidanītanali bhagadattaneṃbavanu ī narana śarajālavadu ka lpānalana kālāṭavidaroḍa nānaliṃdrādyarige sadarave rāya kēḷeṃda

Report an error

ಮುರಿಯದಾ ಬಲವೀತನುರುಬೆಗೆ ಹರಿಯದೀ ಬಲವುಭಯ ಬಲದಲಿ ಕುರಿದರಿಯ ಕುಮ್ಮರಿಯ ಕಡಿತಕೆ ಕಾಣೆನವಧಿಗಳ ಅರಿಯದೀತನ ದುರ್ಗವೀ ಬಲ ದಿರಿವುಗಳ ಬೇಳಂಬವನು ಬೇ ಸರದೆ ಕಾದಿದನೆಂಟು ದಿನ ಭಗದತ್ತ ನೀತನಲಿ

muriyadā balavītanurubege hariyadī balavubhaya baladali kuridariya kummariya kaḍitake kāṇenavadhigaḷa ariyadītana durgavī bala dirivugaḷa bēḷaṃbavanu bē sarade kādidaneṃṭu dina bhagadatta nītanali

Report an error

ಆವನೈ ನೀನಧಿಕತರ ಸಂ ಭಾವಿತನು ಹೇಳೆನೆ ಯುಧಿಷ್ಠಿರ ದೇವನನುಜ ಕಣಾ ಧನಂಜಯನೆನಲು ಮಿಗೆ ಮೆಚ್ಚಿ ನಾವು ನಿಮ್ಮಯ್ಯಂಗೆ ಸಖರಿಂ ದಾವು ನಿನ್ನವರೇನು ಬೇಹುದು ನೀವೆಮಗೆ ಕಡು ಮಾನ್ಯರೆಂದನು ಕಂಡನರ್ಜುನನ

āvanai nīnadhikatara saṃ bhāvitanu hēḷene yudhiṣṭhira dēvananuja kaṇā dhanaṃjayanenalu mige mecci nāvu nimmayyaṃge sakhariṃ dāvu ninnavarēnu bēhudu nīvemage kaḍu mānyareṃdanu kaṃḍanarjunana

Report an error

ಆದರೆಮಗೆಯು ದಿವಿಜಪತಿಯೋ ಪಾದಿ ನೀವೆಮ್ಮಣ್ಣದೇವನ ಮೇದಿನಿಯ ಸಾಮ್ರಾಜ್ಯಪದವಿಯ ರಾಜಸೂಯವನು ಆದರಿಸಿ ಸಾಕೆನಲು ಗಜಹಯ ವಾದಿಯಾದ ಸಮಸ್ತ ವಸ್ತು ವ ನೈದೆ ಕೊಟ್ಟನು ಫಲುಗುಣಂಗೆ ಸುಮಿತ್ರಭಾವದಲಿ

ādaremageyu divijapatiyō pādi nīvemmaṇṇadēvana mēdiniya sāmrājyapadaviya rājasūyavanu ādarisi sākenalu gajahaya vādiyāda samasta vastu va naide koṭṭanu phaluguṇaṃge sumitrabhāvadali

Report an error

ಒಂದು ತಿಂಗಳು ಪಲವು ಮನ್ನಣೆ ಯಿಂದ ಮನ್ನಿಸಿ ತನ್ನ ಸೇನಾ ವೃಂದವನು ಹೇಳಿದನು ಬಳಿಯಲಿ ಕಳುಹಿದನು ನರನ ಮುಂದೆ ನಡೆದನು ರಾಮಗಿರಿಯಲಿ ನಿಂದು ಕಪ್ಪವಕೊಂಡು ನಡೆದನು ಮುಂದಣೀಶಾನ್ಯದಲಿ ಹೊಕ್ಕನು ಭುವನಪರ್ವತವ

oṃdu tiṃgaḷu palavu mannaṇe yiṃda mannisi tanna sēnā vr̥ṃdavanu hēḷidanu baḷiyali kaḷuhidanu narana muṃde naḍedanu rāmagiriyali niṃdu kappavakoṃḍu naḍedanu muṃdaṇīśānyadali hokkanu bhuvanaparvatava

Report an error

ಆ ಗಿರೀಂದ್ರ ನಿವಾಸಿಗಳ ಸರಿ ಭಾಗ ಧನವನು ಕೊಂಡು ಬಳಿಕ ಮ ಹಾಗಜಾಶ್ವನ ಸೂರೆಗೊಂಡನು ಮುಂದೆ ದಂಡೆತ್ತಿ ಆ ಗಯಾಳರ ಗಾವಿಲರ ನಿ ರ್ಭಾಗಧೇಯರ ಮಾಡಿಯುತ್ತರ ಭಾಗದಲಿ ತಿರುಗಿತ್ತು ಪಾಳೆಯವರಸ ಕೇಳೆಂದ

ā girīṃdra nivāsigaḷa sari bhāga dhanavanu koṃḍu baḷika ma hāgajāśvana sūregoṃḍanu muṃde daṃḍetti ā gayāḷara gāvilara ni rbhāgadhēyara māḍiyuttara bhāgadali tirugittu pāḷeyavarasa kēḷeṃda

Report an error

ಗಿರಿಯ ತಪ್ಪಲ ವನಚರರ ಸಂ ಹರಿಸಿ ಮುಂದೆ ಬೃಹಂತಕನ ಕಾ ತರಿಸಿ ಕಾಣಿಸಕೊಂಡು ಸೇನಾಬಿಂದು ನಗರಿಯಲಿ ಇರವ ಮಾಡಿ ಸುದಾಮ ದೈತ್ಯರ ನುರೆ ವಿಭಾಡಿಸಿ ಪಾರ್ವತೇಯರ ಪುರವ ಕೊಂಡು ವುಲೂಕರನು ಪೌರವರ ಭಂಗಿಸಿದ

giriya tappala vanacarara saṃ harisi muṃde br̥haṃtakana kā tarisi kāṇisakoṃḍu sēnābiṃdu nagariyali irava māḍi sudāma daityara nure vibhāḍisi pārvatēyara purava koṃḍu vulūkaranu pauravara bhaṃgisida

Report an error

ಮುಂದೆ ದಸ್ಯುಗಳೇಳುವನು ಕ್ಷಣ ದಿಂದ ಕಾಶ್ಮೀರಕರ ಸಾಧಿಸಿ ಬಂದು ದಶಮಂಡಲದ ಲೋಹಿತರನು ವಿಭಾಡಿಸಿದ ತಂದ ಕಪ್ಪದಲಾ ತ್ರಿಗರ್ತರ ನಂದು ಹದುಳಿಸಿ ಗರುವಿತರನಾ ಟಂದು ತೆಂಕಣದಾಭಿಚಾರಕ ರೂಷಕರ ಗೆಲಿದ

muṃde dasyugaḷēḷuvanu kṣaṇa diṃda kāśmīrakara sādhisi baṃdu daśamaṃḍalada lōhitaranu vibhāḍisida taṃda kappadalā trigartara naṃdu haduḷisi garuvitaranā ṭaṃdu teṃkaṇadābhicāraka rūṣakara gelida

Report an error

ಧಾಳಿಯಿಟ್ಟನು ರೋಚಮಾನನ ಮೇಲೆ ಕಪ್ಪವಕೊಂಡು ಬಿಟ್ಟುದು ಪಾಳೆಯವು ಚಿತ್ರಾಯುಧನ ನರಸಿಂಹನಗರಿಯಲಿ ಮೇಲೆ ವಂಗರ ಮುರಿದು ವರನೇ ಪಾಳಕರ‍್ಪರ ಹೂಣಿಯರನು ವಿ ಶಾಲ ಕಾಂಬೋಜಾದಿಗಳನಪ್ಪಳಿಸಿದನು ತಿರುಗಿ

dhāḷiyiṭṭanu rōcamānana mēle kappavakoṃḍu biṭṭudu pāḷeyavu citrāyudhana narasiṃhanagariyali mēle vaṃgara muridu varanē pāḷakarpara hūṇiyaranu vi śāla kāṃbōjādigaḷanappaḷisidanu tirugi

Report an error

ಪಾರಶೀಕ ಕಿರಾತ ಬರ‍್ಬರ ಪಾರಿಯಾತ್ರರ ಮುರಿದು ಸರ‍್ವ ವಿ ಹಾರವನು ಮಾಡಿದನು ಮ್ಲೇಚ್ಛ ಸಹಸ್ರಕೋಟಿಗಳ ಕ್ಷಾರಕರ ಹೂಣಕರ ಡೊಕ್ಕರ ಪಾರಕರ ಬುರಸಹಣ ಭೂಪರೊ ಳಾರುಭಟೆಯಲಿ ಕಾದಿ ಕೊಂಡನು ಸಕಲ ವಸ್ತುಗಳ

pāraśīka kirāta barbara pāriyātrara muridu sarva vi hāravanu māḍidanu mlēccha sahasrakōṭigaḷa kṣārakara hūṇakara ḍokkara pārakara burasahaṇa bhūparo ḷārubhaṭeyali kādi koṃḍanu sakala vastugaḷa

Report an error

ಬೆದರಿಸಿದನಾ ಹಿಮಗಿರಿಯ ಪಾ ರ್ಶ್ವದ ಕಿರಾತರ ಮುಂದೆ ವಾಯ ವ್ಯದಲಿ ಶೋಧಿಸಿ ಮರಳಿದನು ಹಿಮಗಿರಿಯ ಕುಕ್ಷಿಯಲಿ ಪುದಿದ ನಾನಾ ದ್ರೋಣಿಗಳ ಮ ಧ್ಯದ ಕಿರಾತ ಪುಳಿಂದ ನಿಚಯವ ಸದೆದು ಹತ್ತಿದನಗ್ರಶಿಖರಕೆ ಪಾರ್ವತೀಪಿತನ

bedarisidanā himagiriya pā rśvada kirātara muṃde vāya vyadali śōdhisi maraḷidanu himagiriya kukṣiyali pudida nānā drōṇigaḷa ma dhyada kirāta puḷiṃda nicayava sadedu hattidanagraśikharake pārvatīpitana

Report an error

ಎರಡು ಸಾವಿರ ಯೋಜನವು ಹಿಮ ಗಿರಿಯ ಬಹಳೋತ್ಸೇಧ ಶಿಖರಕೆ ಸರಿಸದಲಿ ಹತ್ತಿದುದು ಪಾಳಯವೇನ ಹೇಳುವೆನು ಕರಿ ತುರಗ ವರ ರಥ ಪದಾತಿಗೆ ಪರಿಗಣನೆಯೆಲ್ಲಿಯದು ಹಿಮಗಿರಿ ಯೆರಡು ಸಾವಿರದಗಲ ತಿರುಗಿತು ರಾಯ ಕೇಳೆಂದ

eraḍu sāvira yōjanavu hima giriya bahaḷōtsēdha śikharake sarisadali hattidudu pāḷayavēna hēḷuvenu kari turaga vara ratha padātige parigaṇaneyelliyadu himagiri yeraḍu sāviradagala tirugitu rāya kēḷeṃda

Report an error

ಗಿರಿಯ ಕೋಣೆಯ ಕುಹರ ಗುಹೆಗಳ ಗರುವರುಂಟೆಂದಾ ಪುಳಿಂದರ ನೊರಸಿ ಕಾಣಿಸಿಕೊಂಡು ಕೊಂಡನು ಸಕಲ ವಸ್ತುಗಳ ಗಿರಿಯನಿಳಿದುದು ನಡೆದು ಬಲ ಕಿಂ ಪುರುಷ ಖಂಡದ ಬಹಳ ನದಿಗಳ ಲೆರಡು ತಡಿಯಲಿ ತಳಿತು ಬಿಟ್ಟುದು ವನ ವನಂಗಳಲಿ

giriya kōṇeya kuhara guhegaḷa garuvaruṃṭeṃdā puḷiṃdara norasi kāṇisikoṃḍu koṃḍanu sakala vastugaḷa giriyaniḷidudu naḍedu bala kiṃ puruṣa khaṃḍada bahaḷa nadigaḷa leraḍu taḍiyali taḷitu biṭṭudu vana vanaṃgaḷali

Report an error

ಅದು ಗಣನೆಗೊಂಬತ್ತು ಸಾವಿರ ವದರೊಳಿದ್ದುದು ಯಕ್ಷಕಿನ್ನರ ಸುದತಿಯರು ಕಿಂಪುರುಷರತಿರಾಗಿಗಳು ಸುಖಮಯರು ಇದರ ಘಲ್ಲಣೆಗಾನಲೇನ ಪ್ಪುದುತದೀಯ ಜನಂಗಳಿತ್ತುದು ಸುದತಿಯರನಾ ಮಂಡಲಕೆ ಮೀಟಾದ ವಸ್ತುಗಳ

adu gaṇanegoṃbattu sāvira vadaroḷiddudu yakṣakinnara sudatiyaru kiṃpuruṣaratirāgigaḷu sukhamayaru idara ghallaṇegānalēna ppudutadīya janaṃgaḷittudu sudatiyaranā maṃḍalake mīṭāda vastugaḷa

Report an error

ಅಲ್ಲಿ ಕೆಲಕಡೆಯಲ್ಲಿ ಗಿರಿ ಗುಹೆ ಯಲ್ಲಿ ನೆರೆದ ಕಿರಾತವರ್ಗವ ಚೆಲ್ಲ ಬಡಿದಪಹರಿಸಿದನು ಬಹುವಿಧ ಮಹಾಧನವ ಮೆಲ್ಲಮೆಲ್ಲನೆ ಹೇಮ ಕೂಟದ ಕಲ್ಲನಡರಿದನಾ ಮಹಾದ್ರಿಗ ಳೆಲ್ಲ ಹಿಮಶೈಲದ ಮಹೋನ್ನತಿ ಬಹಳ ವಿಸ್ತಾರ

alli kelakaḍeyalli giri guhe yalli nereda kirātavargava cella baḍidapaharisidanu bahuvidha mahādhanava mellamellane hēma kūṭada kallanaḍaridanā mahādriga ḷella himaśailada mahōnnati bahaḷa vistāra

Report an error

ಅಡರಿತೀ ಬಲವಿದರ ಬೊಬ್ಬೆಯ ಗಡಬಡೆಗೆ ಪದಘಟ್ಟಣೆಗೆ ಹುಡಿ ಹುಡಿಯಲಾ ಗಿರಿಕೋಟೆ ಕೋಳಾಹಳದ ಕೊಬ್ಬಿನಲಿ ನಡೆದು ಬಿಟ್ಟುದು ಗಿರಿಯ ತುದಿಯಲಿ ತುಡುಕಿದುದು ನಾನಾ ದಿಗಂತವ ತಡೆಯದದುಭುತವಾದ್ಯ ಗಜಹಯ ರಥದ ನಿರ್ಘೋಷ

aḍaritī balavidara bobbeya gaḍabaḍege padaghaṭṭaṇege huḍi huḍiyalā girikōṭe kōḷāhaḷada kobbinali naḍedu biṭṭudu giriya tudiyali tuḍukidudu nānā digaṃtava taḍeyadadubhutavādya gajahaya rathada nirghōṣa

Report an error

ಹೇಮಕೂಟದ ಗಿರಿಯ ಗಂಧ ರ್ವಾಮರರ ಝೋಂಪಿಸಿದನವರು ದ್ದಾಮ ವಸ್ತುವ ಕೊಂಡನಿಳಿದನು ಬಳಿಕ ಪರ್ವತವ ಆ ಮಹಾ ಹರಿವರುಷದಲ್ಲಿಯ ಸೀಮೆಯೋಜನ ನವ ಸಹಸ್ರ ವಿ ರಾಮವದರೊಳಗೆಲ್ಲ ವಿವರಿಸಲರಿಯೆ ನಾನೆಂದ

hēmakūṭada giriya gaṃdha rvāmarara jhōṃpisidanavaru ddāma vastuva koṃḍaniḷidanu baḷika parvatava ā mahā harivaruṣadalliya sīmeyōjana nava sahasra vi rāmavadaroḷagella vivarisalariye nāneṃda

Report an error

ಉತ್ತರೋತ್ತರ ದೇವ ಭೂಮಿಗ ಳೆತ್ತಣವರೀ ದಳನಿಚಯ ತಾ ನೆತ್ತ ಭೂರಿದ್ವನಿಯನೀ ಗಜಬಜವನೀ ಜನವ ಎತ್ತಲೆಂದರಿಯರು ವಿನೋದಕೆ ತೆತ್ತರಲ್ಲಿಯ ಪಕ್ಷಿಮೃಗ ಹಯ ವುತ್ತಮಾಂಗನೆಯರನು ಮನ್ನಿಸಿ ಕಂಡು ಫಲುಗುಣಗೆ

uttarōttara dēva bhūmiga ḷettaṇavarī daḷanicaya tā netta bhūridvaniyanī gajabajavanī janava ettaleṃdariyaru vinōdake tettaralliya pakṣimr̥ga haya vuttamāṃganeyaranu mannisi kaṃḍu phaluguṇage

Report an error

ಎರಡು ಕಡೆಯಂಬುಧಿಯ ಪಾರ್ಶ್ವದ ದುರುಳರನು ಧಟ್ಟಿಸಿ ತದೀಯರು ವೆರಸಿ ಬಡಗಲು ನಡೆದುದಲ್ಲಿಯ ನಿಷಧ ಪರ್ವತಕೆ ಎರಡು ಸಾವಿರ ಯೋಜನದ ತುದಿ ವರೆಗೆ ಹತ್ತಿತು ಬಿಟ್ಟಿತಾ ಗಿರಿ ಬಿರಿಯೆ ಬಿರು ಸೂಳೈಸಿದವು ನಿಸ್ಸಾಳ ಕೋಟಿಗಳು

eraḍu kaḍeyaṃbudhiya pārśvada duruḷaranu dhaṭṭisi tadīyaru verasi baḍagalu naḍedudalliya niṣadha parvatake eraḍu sāvira yōjanada tudi varege hattitu biṭṭitā giri biriye biru sūḷaisidavu nissāḷa kōṭigaḷu

Report an error

ಮೇಲೆ ನಿಷಧಾಚಲದ ಸುತ್ತಲು ಧಾಳಿ ಹರಿದುದು ದೆಸೆದೆಸೆಯ ದೈ ತ್ಯಾಳಿ ಹೆಚ್ಚಿದ ದುಷ್ಟದಾನವ ಮಂಡಲೇಶ್ವರರ ಶೈಲ ಶಿಖರದೊಳುಳ್ಳ ದೊರೆಗಳ ತಾಳು ಬಾಗಿಲ ಕುತ್ತರಲಿ ಕಾ ಲಾಳು ಹೊಕ್ಕುದು ಹೊಯ್ದು ಕಟ್ಟಿತು ಕೂಡೆ ಸೂರೆಗಳ

mēle niṣadhācalada suttalu dhāḷi haridudu desedeseya dai tyāḷi heccida duṣṭadānava maṃḍalēśvarara śaila śikharadoḷuḷḷa doregaḷa tāḷu bāgila kuttarali kā lāḷu hokkudu hoydu kaṭṭitu kūḍe sūregaḷa

Report an error

ಗಿರಿಯ ಶಿಖರದ ಮೇಲ್ಕಡೆಯನಾ ಚರಿಸಿ ನಿಷಧಾಚಲವನಿಳಿದುದು ನರನ ಪಾಳೆಯ ಬಿಟ್ಟುದಾಗಲಿಳಾ ವ್ರತದ ಮೇಲೆ ಅರಸ ಕೇಳೊಂಬತ್ತು ಸಾವಿರ ಪರಿಗಣಿತ ಯೋಜನದ ನೆಲ ಸುರ ಗಿರಿಯ ಸುತ್ತಣ ದೇಶವತಿ ರಮಣೀಯ ತರವೆಂದ

giriya śikharada mēlkaḍeyanā carisi niṣadhācalavaniḷidudu narana pāḷeya biṭṭudāgaliḷā vratada mēle arasa kēḷoṃbattu sāvira parigaṇita yōjanada nela sura giriya suttaṇa dēśavati ramaṇīya taraveṃda

Report an error

ಚೂಣಿಗಾನುವರಿಲ್ಲ ಪಾರ್ಥನ ಬಾಣಕಿದಿರಾರುಂಟು ವಾದ್ಯ ಶ್ರೇಣಿ ಚಾತುರ್ಬಲದ ಘಲ್ಲಣೆಗಿಲ್ಲ ಗರ್ವಿತರು ಹೂಣೆ ಹೊಕ್ಕನು ಕನಕಶೈಲ ದ್ರೋಣಿಗಳ ದುರ್ಬಲ ಸುರೌಘವ ನಾಣೆಗಂಜಿಸಿ ಕಳೆದುಕೊಂಡನು ಸಕಲವಸ್ತುಗಳ

cūṇigānuvarilla pārthana bāṇakidirāruṃṭu vādya śrēṇi cāturbalada ghallaṇegilla garvitaru hūṇe hokkanu kanakaśaila drōṇigaḷa durbala suraughava nāṇegaṃjisi kaḷedukoṃḍanu sakalavastugaḷa

Report an error

ಹರಿದು ಹತ್ತಿತು ಗಂಧಮಾದನ ಗಿರಿಯ ಸುತ್ತಣ ಯಕ್ಷ ವಿದ್ಯಾ ಧರರನಂಜಿಸಿ ಕೊಂಡನಲ್ಲಿಯ ಸಾರ ವಸ್ತುಗಳ ಗಿರಿಯನಿಳಿದರು ಜಂಬು ನೇರಿಲ ಮರನ ಕಂಡರು ಗಗನಚುಂಬಿತ ವೆರಡು ಸಾವಿರ ಯೋಜನಾಂತದೊಳತಿ ವಿಳಾಸದಲಿ

haridu hattitu gaṃdhamādana giriya suttaṇa yakṣa vidyā dhararanaṃjisi koṃḍanalliya sāra vastugaḷa giriyaniḷidaru jaṃbu nērila marana kaṃḍaru gaganacuṃbita veraḍu sāvira yōjanāṃtadoḷati viḷāsadali

Report an error

ಅದರ ಫಲ ಹೇರಾನೆಗಳ ತೋ ರದಲಿಹವು ಗಿರಿಸಾರ ಶಿಲೆಗಳ ಹೊದರಿನಲಿ ಬಿದ್ದೊಡೆದು ಹೊಳೆಯಾದುದು ಮಹಾರಸದ ಅದು ಸುಧಾಮಯವಾಯ್ತು ಜಂಬೂ ನದಿ ಜಲಸ್ಪರ್ಶದಲಿ ಜಾಂಬೂ ನದ ಸುವರ್ಣವೆಯಾದುದಾನದಿಯೆರಡು ತಡಿವಿಡಿದು

adara phala hērānegaḷa tō radalihavu girisāra śilegaḷa hodarinali biddoḍedu hoḷeyādudu mahārasada adu sudhāmayavāytu jaṃbū nadi jalasparśadali jāṃbū nada suvarṇaveyādudānadiyeraḍu taḍiviḍidu

Report an error

ಆ ರಸೋದಕ ಪಾನವೇ ಸಂ ಸಾರ ಸೌಖ್ಯದ ಸಿದ್ಧಿಯಿತರಾ ಹಾರವಿಂಧನ ತಂಡುಲಾಗ್ನಿಕ್ರಮ ವಿಧಾನವದು ನಾರಿಯರು ಸಹಿತಲ್ಲಿ ಸಿದ್ಧರು ಚಾರಣರು ರಮಣೀಯ ತೀರ ವಿ ಹಾರಿಗಳು ಬಹುರತ್ನದಿಂ ಮನ್ನಿಸಿದರರ್ಜುನನ

ā rasōdaka pānavē saṃ sāra saukhyada siddhiyitarā hāraviṃdhana taṃḍulāgnikrama vidhānavadu nāriyaru sahitalli siddharu cāraṇaru ramaṇīya tīra vi hārigaḷu bahuratnadiṃ mannisidararjunana

Report an error

ಕೇಳಿ ಸೊಗಸಿದ ವಸ್ತುವಿಗೆ ಕ ಣ್ಣಾಲಿ ಬಿದ್ದಣವಾಯ್ತಲಾ ಸುರ ಪಾಲ ಪದವಿದರೊರೆಗೆ ಬಹುದೇ ತೀರವಾಸಿಗಳ ಧಾಳಿ ಧಟ್ಟಣೆಗಳನು ಮಾಣಿಸಿ ಪಾಳೆಯವನು ಪವನ ಸರೋವರ ವೇಲೆಯಲಿ ಬಿಡಿಸಿದನು ಜಂಬೂನದಿಯ ತೀರದಲಿ

kēḷi sogasida vastuvige ka ṇṇāli biddaṇavāytalā sura pāla padavidarorege bahudē tīravāsigaḷa dhāḷi dhaṭṭaṇegaḷanu māṇisi pāḷeyavanu pavana sarōvara vēleyali biḍisidanu jaṃbūnadiya tīradali

Report an error

ಲಲಿತ ದಿವ್ಯಾಭರಣ ರತ್ನಾ ವಳಿಯನನುಕರಿಸಿದನು ಪಾಳೆಯ ಸುಳಿದುದಮರಾಚಲದ ಕೇಸರ ಶಿಖರಿಗಳ ಕಳೆದು ಹೊಳೆ ಹೊಳೆವ ಮೇರುವಿನ ಸುತ್ತಣ ವಳಯದರ್ಧವನಾಕರಿಸಿ ಕೈ ವಳಿಸಿ ಬಿಟ್ಟನು ಹೊಕ್ಕಿಳಾವೃತವರುಷ ಸೀಮೆಯಲಿ

lalita divyābharaṇa ratnā vaḷiyananukarisidanu pāḷeya suḷidudamarācalada kēsara śikharigaḷa kaḷedu hoḷe hoḷeva mēruvina suttaṇa vaḷayadardhavanākarisi kai vaḷisi biṭṭanu hokkiḷāvr̥tavaruṣa sīmeyali

Report an error

ಸೇನೆ ಪಡುವಲು ತಿರುಗಿ ಸುತ್ತಣ ವಾನುಪೂರ್ವಿಯ ಗಂಧಮಾದನ ಸಾನುವನು ವೆಂಠಣಿಸಿಯಡರಿತು ಚೂಣಿಶೃಂಗದಲಿ ಆ ನಗೇಂದ್ರನನಿಳಿದು ಪಡುವಣ ಕಾನನಂಗಳ ಕಳೆದು ಬಿಟ್ಟುದು ಸೇನೆ ಬಳಸಿನಲಿ

sēne paḍuvalu tirugi suttaṇa vānupūrviya gaṃdhamādana sānuvanu veṃṭhaṇisiyaḍaritu cūṇiśr̥ṃgadali ā nagēṃdrananiḷidu paḍuvaṇa kānanaṃgaḷa kaḷedu biṭṭudu sēne baḷasinali

Report an error

ಅಲ್ಲಿ ಸಾಗರ ತೀರ ಪರಿಯಂ ತೆಲ್ಲಿ ಗಜಹಯವೆಲ್ಲಿ ಸುದತಿಯ ರೆಲ್ಲಿ ಮಣಿಗಣವೆಲ್ಲಿ ಬಹುಧನವೆಲ್ಲಿ ರಮಣೀಯ ಅಲ್ಲಿಗಲ್ಲಿಗೆ ನಡೆದು ಸಾಧಿಸಿ ಕೆಲ್ಲೆ ಕುಹರದ ಕೋಣೆ ಬಾಗುಗ ಳೆಲ್ಲವನು ಹೊಕ್ಕರಿಸಿ ತೆರಳಿಚಿದನು ಮಹಾಧನವ

alli sāgara tīra pariyaṃ telli gajahayavelli sudatiya relli maṇigaṇavelli bahudhanavelli ramaṇīya alligallige naḍedu sādhisi kelle kuharada kōṇe bāguga ḷellavanu hokkarisi teraḷicidanu mahādhanava

Report an error

ಎಡಕಡೆಯಲೊಂಬತ್ತು ಸಾವಿರ ನಡು ನೆಲನನಾಕರಿಸಿ ಮೂಡಣ ಕಡೆಗೆ ತಿರುಗಿತು ಗಂಧಮಾದನ ಗಿರಿಯನೇರಿಳಿದು ನಡೆದಿಳಾವೃತದೊಳಗೆ ಬಿಟ್ಟುದು ಪಡೆ ಸುರಾದ್ರಿಯನುಳುಹಿ ಬಲದಲಿ ನಡೆಯಲತಿ ದೂರದಲಿ ಕಂಡರು ಮಂದರಾಚಲವ

eḍakaḍeyaloṃbattu sāvira naḍu nelananākarisi mūḍaṇa kaḍege tirugitu gaṃdhamādana giriyanēriḷidu naḍediḷāvr̥tadoḷage biṭṭudu paḍe surādriyanuḷuhi baladali naḍeyalati dūradali kaṃḍaru maṃdarācalava

Report an error

ಇದುವೆ ಕಡೆಗೋಲಾಯ್ತು ಕಡೆವಂ ದುದಧಿಯನು ತಾನಿದು ಮಹಾಗಿರಿ ಯಿದರ ಬಿಂಕವ ನೋಡಬೇಕೆಂದರ್ಜುನನ ಸೇನೆ ಒದರಿ ಹತ್ತಿತು ನಡುವಣರೆ ದು ರ್ಗದಲಿ ಬೆಟ್ಟಂಗಳಲಿ ನೃಪರಿ ದ್ದುದು ಮಹಾಹವವಾಯ್ತು ಪಾರ್ಥನ ಚೂಣಿಯವರೊಡನೆ

iduve kaḍegōlāytu kaḍevaṃ dudadhiyanu tānidu mahāgiri yidara biṃkava nōḍabēkeṃdarjunana sēne odari hattitu naḍuvaṇare du rgadali beṭṭaṃgaḷali nr̥pari ddudu mahāhavavāytu pārthana cūṇiyavaroḍane

Report an error

ಇಳುಹಿದರು ಚೂಣಿಯನು ಮುಂದರೆ ನೆಲೆಯ ಭಟರೌಕಿದರು ಭಾರಿಯ ತಲೆವರಿಗೆಗಳಲೊತ್ತಿದರು ಹೊಗಿಸಿದರು ದುರ್ಗವನು ಕಲುವಳೆಯ ಕೋಲಾಹಲಕ್ಕಿವ ರಳುಕದಿರಿದರು ಸುರಗಿಯಲಿ ತೆನೆ ವಳಿಯ ಹಿಡಿದರು ಹೊಯ್ದು ಕೇಶಾಕೇಶಿ ಯುದ್ಧದಲಿ

iḷuhidaru cūṇiyanu muṃdare neleya bhaṭaraukidaru bhāriya talevarigegaḷalottidaru hogisidaru durgavanu kaluvaḷeya kōlāhalakkiva raḷukadiridaru suragiyali tene vaḷiya hiḍidaru hoydu kēśākēśi yuddhadali

Report an error

ಶಕರು ಖದ್ಯೋತ ಪ್ರತಾಪರು ವಿಕಳ ಚಿಂಘರು ದೀರ್ಘಮಯವೇ ಣಿಕರು ಪಶುಪಾಲಕ ಪುಳಿಂದರು ಕಂಕಣಾಹ್ವಯರು ಸಕಲ ದಸ್ಯುಗಳೈದೆ ಸೋತುದು ವಿಕಳ ಬಲವೊಪ್ಪಿಸಿತು ಸರ್ವ ಸ್ವಕವ ಸಂಧಾನದಲಿ ನೆಲೆಯಾಯ್ತಲ್ಲಿಯರ್ಜುನಗೆ

śakaru khadyōta pratāparu vikaḷa ciṃgharu dīrghamayavē ṇikaru paśupālaka puḷiṃdaru kaṃkaṇāhvayaru sakala dasyugaḷaide sōtudu vikaḷa balavoppisitu sarva svakava saṃdhānadali neleyāytalliyarjunage

Report an error

ಶೋಧಿಸಿದನಾ ಗಿರಿಯನಾಚೆಯ ಹಾದಿಯಲಿ ಹೊರವಂಟು ಬರೆ ಮರಿ ಯಾದೆಗಿಕ್ಕಿದ ಬೆಟ್ಟವಿದ್ದುದು ಮಾಲ್ಯವಂತಗಿರಿ ಭೇದಿಸಿದನದರೊಳಗು ಹೊರಗಿನ ಲಾದ ವಸ್ತುವ ಕೊಂಡು ತಚ್ಛೈ ಲೋದರವನೇರಿಳಿದು ಭದ್ರಾಶ್ವಕ್ಕೆ ನಡೆತಂದ

śōdhisidanā giriyanāceya hādiyali horavaṃṭu bare mari yādegikkida beṭṭaviddudu mālyavaṃtagiri bhēdisidanadaroḷagu horagina lāda vastuva koṃḍu tacchai lōdaravanēriḷidu bhadrāśvakke naḍetaṃda

Report an error

ಅದು ಮಹಾ ರಮಣೀಯತರವಂ ತದರೊಳಿದ್ದುದು ಶುದ್ಧಭೋಗಾ ಸ್ಪದರು ಯಕ್ಷೋರಕ್ಷಗಂಧರ್ವಾಪ್ಸರೋ ನಿಕರ ಕುದುರೆ ರಥ ಗಜ ಪತ್ತಿ ನಿರ್ಘೋ ಷದಲಿ ಬೆಬ್ಬಳೆಯಾಯ್ತು ಬೇಳಂ ಬದ ವಿಘಾತಿಗೆ ಸಿಲುಕಿ ತೆತ್ತುದು ಸಕಲ ವಸ್ತುಗಳ

adu mahā ramaṇīyataravaṃ tadaroḷiddudu śuddhabhōgā spadaru yakṣōrakṣagaṃdharvāpsarō nikara kudure ratha gaja patti nirghō ṣadali bebbaḷeyāytu bēḷaṃ bada vighātige siluki tettudu sakala vastugaḷa

Report an error

ದೊರಕಿತಲ್ಲಿಯಪೂರ್ವ ವಸ್ತೂ ತ್ಕರ ಸಮುದ್ರದ್ವೀಪ ಪರಿಯಂ ತರ ನಡೆದನೊಂಬತ್ತು ಸಾವಿರ ಯೋಜನಾಂತರವ ತಿರುಗಿದನು ಭದ್ರಾಶ್ವಕವನಾ ಕರಿಸಿ ಬಡಗಲು ನಡೆದರಲ್ಲಿಯ ಗಿರಿಯ ಕಂಡರು ಹತ್ತಿದರು ಹರುಷದಲಿ ಬೊಬ್ಬಿಡುತ

dorakitalliyapūrva vastū tkara samudradvīpa pariyaṃ tara naḍedanoṃbattu sāvira yōjanāṃtarava tirugidanu bhadrāśvakavanā karisi baḍagalu naḍedaralliya giriya kaṃḍaru hattidaru haruṣadali bobbiḍuta

Report an error

ನೀಲ ಗಿರಿಯಗ್ರದಲಿ ಬಿಟ್ಟುದು ಪಾಳೆಯವು ಬೊಬ್ಬೆಯಲಿ ದಿಕ್ಕಿನ ಮೂಲೆ ಬಿರಿದುದು ಜರಿದವದ್ರಿಗಳೇನನುಸುರುವೆನು ಮೇಲು ದುರ್ಗದ ಸಂಧಿಗೊಂದಿಯೊ ಳಾಳು ಹರಿದುದು ಸೂರೆಗೊಂಡು ವಿ ಶಾಳ ವಸ್ತುವ ತಂದರಲ್ಲಿದ್ದ ರಸುಗಳ ಗೆಲಿದು

nīla giriyagradali biṭṭudu pāḷeyavu bobbeyali dikkina mūle biridudu jaridavadrigaḷēnanusuruvenu mēlu durgada saṃdhigoṃdiyo ḷāḷu haridudu sūregoṃḍu vi śāḷa vastuva taṃdarallidda rasugaḷa gelidu

Report an error

ಎರಡು ಸಾವಿರದುದ್ದವದು ಮ ತ್ತೆರಡು ಸಾವಿರದಗಲವದನಾ ಕರಿಸಿ ರಮ್ಯಕ ಭೂಮಿಗಿಳಿದರು ಹೊಕ್ಕರಾ ನೆಲನ ಅರಸ ಕೇಳಲ್ಲಲ್ಲಿ ಸುಮನೋ ಹರದ ವಸ್ತುವ ಕೊಂಡು ನವ ಸಾ ವಿರವನಗಲಕೆ ಸುತ್ತಿ ಬಂದರು ಗೆಲಿದು ಗರ್ವಿತರ

eraḍu sāviraduddavadu ma tteraḍu sāviradagalavadanā karisi ramyaka bhūmigiḷidaru hokkarā nelana arasa kēḷallalli sumanō harada vastuva koṃḍu nava sā viravanagalake sutti baṃdaru gelidu garvitara

Report an error

ಅರಸ ಕೇಳಲ್ಲಿಂದ ಬಡಗಲು ಹರಿದು ಬಿಟ್ಟರು ಹತ್ತಿದರು ಬೇ ಸರದೆ ಕಲುದರಿಗಳಲಿ ಬಹಳ ಶ್ವೇತಪರ್ವತವ ಗಿರಿಯ ತುದಿಗಳ ತೋಟದಲಿ ಗ ಹ್ವರದ ಕೊಳ್ಳದ ಕೋಹಿನಲಿ ಹೊ ಕ್ಕಿರಿದು ಶೋಧಿಸಿಕೊಂಡರಲ್ಲಿಯ ಸಾರವಸ್ತುಗಳ

arasa kēḷalliṃda baḍagalu haridu biṭṭaru hattidaru bē sarade kaludarigaḷali bahaḷa śvētaparvatava giriya tudigaḷa tōṭadali ga hvarada koḷḷada kōhinali ho kkiridu śōdhisikoṃḍaralliya sāravastugaḷa

Report an error

ಇಳಿದನಾ ಗಿರಿಯನು ಹಿರಣ್ಮಯ ದೊಳಗೆ ಬಿಟ್ಟನು ಪಾಳೆಯವ ತ ದ್ವಲಯ ಮಿಗಿಲೊಂಬತ್ತು ಸಾವಿರ ಯೋಜನಾಂತರವ ಬಳಸಿ ಬಂದನು ವಿಮಲ ಸೌಧಾ ವಳಿಯ ನೆಲೆಯುಪ್ಪರಿಗೆಗಳ ವರ ಲಲನೆಯರು ಕಂಡೀತನನು ಹೊಗಳಿದರು ತಮತಮಗೆ

iḷidanā giriyanu hiraṇmaya doḷage biṭṭanu pāḷeyava ta dvalaya migiloṃbattu sāvira yōjanāṃtarava baḷasi baṃdanu vimala saudhā vaḷiya neleyupparigegaḷa vara lalaneyaru kaṃḍītananu hogaḷidaru tamatamage

Report an error

ಈತ ಭಾರತ ವರುಷಪತಿಯನು ಜಾತ ಗಡ ತತ್ಕರ್ಮ ಭೂಮಿಯ ಲೀತನಧಿಪತಿ ಗೆಲಿದನಿತ್ತಲು ದೇವ ಭೂಮಿಪರ ಈತ ಗೌರೀಸುತನವೋಲ್ ಪುರು ಹೂತ ತನಯನವೋಲು ಭುವನ ಖ್ಯಾತನೆಂದಾ ಸ್ತ್ರೀಕಟಕ ಕೊಂಡಾಡಿತರ್ಜುನನ

īta bhārata varuṣapatiyanu jāta gaḍa tatkarma bhūmiya lītanadhipati gelidanittalu dēva bhūmipara īta gaurīsutanavōl puru hūta tanayanavōlu bhuvana khyātaneṃdā strīkaṭaka koṃḍāḍitarjunana

Report an error

ತನತನಗೆ ತರುಣಿಯರು ಹೂವಿನ ತನಿವಳೆಯ ಕರೆದರು ಕನತ್ಕಾಂ ಚನ ವಿಭೂಷಣ ರತ್ನಚಯ ಪೂರಿತದ ಪೆಟ್ಟಿಗೆಯ ವನಿತೆಯರನಾ ದೇಶದಲಿ ಮೀ ಟೆನಿಪರನು ಮೃಗಪಕ್ಷಿ ಕೃಷ್ಣಾ ಜಿನವನಂತವನಿತ್ತು ಸತ್ಕರಿಸಿದರು ಫಲುಗುಣನ

tanatanage taruṇiyaru hūvina tanivaḷeya karedaru kanatkāṃ cana vibhūṣaṇa ratnacaya pūritada peṭṭigeya vaniteyaranā dēśadali mī ṭeniparanu mr̥gapakṣi kr̥ṣṇā jinavanaṃtavanittu satkarisidaru phaluguṇana

Report an error

ಧಾರುಣೀಪತಿ ಕೇಳು ದಳ ನಡು ದಾರಿ ಬಡಗಣ ಶೃಂಗಪರ್ವತ ದೋರೆಯಲಿ ದೊರೆಗಳನು ಧಟ್ಟಿಸಿ ಸೆಳೆದು ಬಹುಧನವ ಭಾರಣೆಯ ಮುಂಗುಡಿಯ ಕೊಳ್ಳೆಗ ಳೋರಣಿಸಿ ತುದಿಗೇರಿ ಸಿದ್ಧರ ಚಾರಣರ ವಿದ್ಯಾಧರರ ಮುತ್ತಿದರು ಮನ್ನಿಸದೆ

dhāruṇīpati kēḷu daḷa naḍu dāri baḍagaṇa śr̥ṃgaparvata dōreyali doregaḷanu dhaṭṭisi seḷedu bahudhanava bhāraṇeya muṃguḍiya koḷḷega ḷōraṇisi tudigēri siddhara cāraṇara vidyādharara muttidaru mannisade

Report an error

ಅರಸು ಮೋಹರ ಹತ್ತಿತಾಗಿರಿ ಎರಡು ಸಾವಿರದಗಲವದರಲಿ ತುರುಗಿ ಬಿಟ್ಟಿತು ಸೇನೆ ಸೂಳೈಸಿದವು ನಿಸ್ಸಾಳ ಬಿರಿದುದಾ ಗಿರಿ ಕೆಳಗಣುತ್ತರ ಕುರುಗಳೆದೆ ಜರ್ಝರಿತವಾಯ್ತ ಬ್ಬರಕೆ ಬಡಗಣ ಕಡಲು ಕದಡಿತು ತಳದ ತಾಯ್ಮಳಲ

arasu mōhara hattitāgiri eraḍu sāviradagalavadarali turugi biṭṭitu sēne sūḷaisidavu nissāḷa biridudā giri keḷagaṇuttara kurugaḷede jarjharitavāyta bbarake baḍagaṇa kaḍalu kadaḍitu taḷada tāymaḷala

Report an error

ನೆರೆದರಲ್ಲಿಯ ನೃಪರು ದೂತರ ಹರಿಯ ಬಿಟ್ಟರು ಪಾರ್ಥನಿದ್ದೆಡೆ ಗರಸ ಕೇಳವರುಗಳು ಬಂದರು ಕಂಡರರ್ಜುನನ ಗಿರಿಯ ನಿಳಿಯದಿರಿತ್ತಲುತ್ತರ ಕುರುಗಳಿಹ ಸಂಸ್ಥಾನವಿದು ಗೋ ಚರಿಸಲರಿಯದು ನರರ ಕಾಲ್ದುಳಿಗೆಂದರವರಂದು

neredaralliya nr̥paru dūtara hariya biṭṭaru pārthaniddeḍe garasa kēḷavarugaḷu baṃdaru kaṃḍararjunana giriya niḷiyadirittaluttara kurugaḷiha saṃsthānavidu gō carisalariyadu narara kālduḷigeṃdaravaraṃdu

Report an error

ಅಲ್ಲದಾಕ್ರಮಿಸಿದರೆ ನಿನಗವ ರಲ್ಲಿ ಕಾಣಿಕೆ ದೊರಕಲರಿಯದು ಬಲ್ಲಿದವರುತ್ತರದ ಕುರುಗಳು ನಿನಗೆ ಬಾಂಧವರು ಗೆಲ್ಲದಲಿ ಫಲವಿಲ್ಲ ಸಾಹಸ ವಲ್ಲಿ ಮೆರೆಯದು ಮರ್ತ್ಯ ದೇಹದೊ ಳಲ್ಲಿ ಸುಳಿವುದು ಭಾರವೆಂದರು ಚರರು ಫಲುಗುಣಗೆ

alladākramisidare ninagava ralli kāṇike dorakalariyadu ballidavaruttarada kurugaḷu ninage bāṃdhavaru gelladali phalavilla sāhasa valli mereyadu martya dēhado ḷalli suḷivudu bhāraveṃdaru cararu phaluguṇage

Report an error

ಮಾಣಲದು ನಮಗವರು ಬಂಧು ಶ್ರೇಣಿಗಳು ಗಡ ಹೋಗಲದು ಕ ಟ್ಟಾಣಿಯಾವುದು ನಿಮ್ಮ ದೇಶದೊಳ್ಳುಳ್ಳ ವಸ್ತುಗಳ ವಾಣಿಯವ ಮಾಡದೆ ಸುಯಜ್ಞದ ಕಾಣಿಕೆಯನೀವುದು ಯುಧಿಷ್ಠಿರ ನಾಣೆ ನಿಮಗೆನೆ ತಂದು ಕೊಟ್ಟರು ಸಕಲ ವಸ್ತುಗಳ

māṇaladu namagavaru baṃdhu śrēṇigaḷu gaḍa hōgaladu ka ṭṭāṇiyāvudu nimma dēśadoḷḷuḷḷa vastugaḷa vāṇiyava māḍade suyajñada kāṇikeyanīvudu yudhiṣṭhira nāṇe nimagene taṃdu koṭṭaru sakala vastugaḷa

Report an error

ತಿರುಗಿತಲ್ಲಿಂದಿತ್ತ ಪಾಳೆಯ ಮುರಿದು ಬಿಟ್ಟು ಹಿರಣ್ಮಯವನಾ ಕರಿಸಿ ರಮ್ಯಕದಿಂದಿಳಾವೃತದಿಂದ ದಕ್ಷಿಣಕೆ ಭರದಿನೈದುತ ಹರಿವರುಷ ಕಿಂ ಪುರುಷವನು ದಾಟುತ ಹಿಮಾನ್ವಿತ ಗಿರಿಯನೇರಿದುದಿಳಿದು ಬಂದುದು ತೆಂಕ ಮುಖವಾಗಿ

tirugitalliṃditta pāḷeya muridu biṭṭu hiraṇmayavanā karisi ramyakadiṃdiḷāvr̥tadiṃda dakṣiṇake bharadinaiduta harivaruṣa kiṃ puruṣavanu dāṭuta himānvita giriyanēridudiḷidu baṃdudu teṃka mukhavāgi

Report an error

ಕಳುಹಿ ಕಳೆದನು ಹಿಂದೆ ಕೂಡಿದ ಬಲವನವರವರೆಲ್ಲ ಯಾಗ ಸ್ಥಳಕೆ ಬಹ ನೇಮದಲಿ ಹರಿದುದು ನಿಜಪುರಂಗಳಿಗೆ ನೆಲನನಗಲದ ವಸ್ತುವಿದನೆಂ ತಳವಡಿಸಿದನೊ ಶಿವಯೆನುತ ಸುರ ರುಲಿಯೆ ಹೊಕ್ಕನು ಪಾರ್ಥನಿಂದ್ರಪ್ರಸ್ಥ ಪುರವರವ

kaḷuhi kaḷedanu hiṃde kūḍida balavanavaravarella yāga sthaḷake baha nēmadali haridudu nijapuraṃgaḷige nelananagalada vastuvidaneṃ taḷavaḍisidano śivayenuta sura ruliye hokkanu pārthaniṃdraprastha puravarava

Report an error

Illustration: Verse & Place (Project-owned).